ಹೀಗೊಂದು ನಮ್ಮದೇ ಬದುಕು...!

     

ಹೀಗೊಂದು ನಮ್ಮದೇ ಬದುಕು...!



ಮಾತಿಗೊಮ್ಮೆ ಬಂದು ಹೋಗುವ , "ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ " ಎನ್ನುವ ಹತಾಶ ಧ್ವನಿಯನ್ನೊಮ್ಮೆ ಅವಲೋಕಿಸಿದರೆ...,
ದುಸ್ತರ ಈ ಬದುಕು ಎನ್ನುವುದೋ ಅಥವಾ ಕಾಲಕ್ಕೆ ತಕ್ಕಂತೆ ನಡಯಬೇಕು ಎನ್ನುವ ಗೊಂದಲವೋ.. ?

ಅವಲೋಕಿಸಿದರೆ ..,
ನಾವೇ ಪುಣ್ಯವಂತರು ಎನಿಸುತ್ತದೆ..
ನಮ್ಮಲ್ಲಿ ಎಷ್ಟೋ ಪೋಷಕರು ರೈತಾಪಿ ವರ್ಗದವರು.. ಅನ್ನದಾತನ ಕಷ್ಟ ಗೊತ್ತಿದ್ದ ಅವರುಗಳು.. ವಿದ್ಯೆಯ ಭೋಗಕ್ಕೆ ನಮ್ಮನ್ನು ಹಾಕಿ, ಉದ್ಯೋಗ ಆರಿಸುವಿಕೆಯ ತೆಕ್ಕೆಗೆ ಹಾಕಿದ ಕಾಳಜೀವಂತರು..!

ಆದರೂ, ನಮ್ಮ ಬಾಲ್ಯವೇ ಸುಂದರವಲ್ಲವೇ..!
ನೇಗಿಲಯೋಗಿಯ ಪರಿಚಯ ಮನೇಲಿ, ಒಲೆ ಅಡಿಗೆಯ ರುಚಿ, ಬೇಕರಿ ತಿನಿಸುಗಳು.., ಯಾರಾದರೂ ಅತಿಥಿಗಳು ಬಂದಾಗ, ಹಬ್ಬ ಹರಿದಿನಗಳಲ್ಲಿ ಮಾತ್ರ...!

ಪ್ರಕೃತಿ ನಿಯಮದ ನಿಗದಿಯಂತೆ ಕಾಲಕ್ಕೆ ಮಳೆ , ಬಿಸಿಲು , ಚಳಿ, ವಸಂತದ  ಆಗಮನವಿತ್ತು..!
ಮಳೆಯ ಆಗಮನದಿ , ಅಜ್ಜನ ಛತ್ರಿ  ಪಡಸಾಲೆಯಲ್ಲಿ ನೇತಾಡುತಿತ್ತು.. !
ಬಿಸಿಲ ಝಳಕ್ಕೆ ,ಬೀಸಣಿಕೆಯ ತಂಪಿರುತಿತ್ತು.. !
ಚಳಿಯ ಹೊಡೆತಕ್ಕೆ ,ಅಜ್ಜಿ ನೇಯುತಿದ್ದ  ಹುಣ್ಣೆಯ ಅಂಗಿ, ಕೌದಿಯ ಬೆಚ್ಚಗಿನ ಹೊದಿಕೆ ಇರುತಿತ್ತು ..!
ವಸಂತದ ಆಗಮನದಿ ಮರಗಿಡಗಳ ಚಿಗುರಿನ ಹಸಿರಿತ್ತು..!

ಮನೆ ಅಂಗಳದಿ ,ಆಡಲೂ ಕುಂಟಾಬಿಲ್ಲಿ,  ಬುಗುರಿ ,ಲಗೋರಿ , ಚಿನ್ನಿದಾಂಡು, ಚೂರ್ ಚಂಡು, ಗೋಲಿಗಳ ಆಟವಿತ್ತು..!
ಕತ್ತಲಾಗುವವರೆಗೆ ಆಡುವ ಸುಖವಿತ್ತು.. ತಡವಾಗಿ ಮನೆಗೆ ಹೋಗುವಾಗ , ಅಪ್ಪನ ಭಯವಿತ್ತು.. ಅಪ್ಪನ ಏಟಿಗೆ ತಡೆಯುವ ಅಮ್ಮನ ಆಶ್ರಯದ ಸೆರಗಿತ್ತು..!

ಸಂತೆಗೆ , ಅಮ್ಮನೊಡನೆ ಹೋಗುವ ಖುಷಿಯಿತ್ತು. ಅಮ್ಮನ ಚೌಕಾಸಿ ಮಾಡುವ ಪ್ರತಿಭೆಗೆ ಬೆರಗಾಗುವ ಹೆಮ್ಮೆಯಿತ್ತು..!
ಮಿಕ್ಕ ಪುಡಿಗಾಸಿನಲ್ಲಿ ಅಮ್ಮ ಕೊಡಿಸುವ ಸಿಹಿ ತಿಂಡಿಯ ರುಚಿಯಿತ್ತು..!
ತಿಂಗಳಿಗೊಮ್ಮೆ ಅಮ್ಮ ಬರೆಯುವ ರೇಷನ್ ಪಟ್ಟಿಯ ಪ್ರಕಾರ , ನಾನು ಅಪ್ಪ ಹೋಗಿ ತರುವ ದಿನಸಿ ಅಂಗಡಿ ಇತ್ತು..!
ದುಡ್ಡು ಸಾಲದೆಡೆ , ಲೆಕ್ಕ ಬರೆಸಿ ಸಾಲ ತರುವ ಕಾಲವಿತ್ತು..!
ಬಡ್ತಿಯಂತೆ ನಾಲ್ಕಾಣೆಯ ಪೇಪ್ಪ್ರೋಮೆಂಟ್ ಸಿಕ್ಕು,ಅಪ್ಪನ ಸೈಕಲ್ ನ ಮುಂದಿರುವ , ಪುಟಾಣಿ ಸೀಟಿನಲ್ಲಿ ರಾಜನಂತೆ ಬರುವ ಯೋಗವಿತ್ತು..!


ಹುಷಾರಿಲ್ಲದೊಡನೆ , ಅಮ್ಮನ ಅಡುಗೆ ಮನೆಯ ಪದಾರ್ಥಗಳಿಂದ ಔಷದಿಯ ತಯಾರಿಕೆಯಾಗುತ್ತಿತ್ತು..!
ಅನಾರೋಗ್ಯ ಅತಿಯಾದಾಗ ಮಾತ್ರ, ಸರಕಾರಿ ದವಾಖಾನೆಗೆ ಹಾಜರಾಗುವ ಹಾಗಿತ್ತು..!

ನೋಡಲು , ಉದಯ , ಉಷಾ , ಡಿ ಡಿ ಚಂದನ , ಈ ಟಿವಿ ಎಂಬ ಮೂರು ಮತ್ತೊಂದು ಚಾನೆಲ್ ಗಳು ಇದ್ದವು..!
ಸಿಲ್ಲಿ ಲಲ್ಲಿಯ ಸಮಯದಿ, ವೈರಿಯಂತೆ ಅಡ್ಡ ಬರುವ ಉದಯ ವಾರ್ತೆಗೆ , ನಮ್ಮ ಬೈಗುಳದ ಸರದಿಯಿತ್ತು..!

ಸರಕಾರಿ ಶಾಲೆಗಳು ಉನ್ನತವಾದವವು ಎಂಬ ಸ್ವಂತಿಕೆಯಿತ್ತು . ಕಾನ್ವೆಂಟ್ ಶಾಲೆಗಳು, ಶ್ರೀಮಂತರ ಸ್ವತ್ತು ಎನ್ನುವಂತಿದ್ದ ಕಾಲವದು..!
ಸುತ್ತಲೂ ಕನ್ನಡ ಒಂದೇ ಮಾತಾಗಿತ್ತು.. ಅಕ್ಕ ಪಕ್ಕದ ಮನೆಯವರು ಬಂಧು ಬಳಗದಂತೆ ಇರುತಿದ್ದ ಕಾಲವದು..!

ಶಾಲೆಗೆ ಹೋಗುವಾಗ , ಬೂಟಿಗೆ ಕೊಬ್ಬರಿಎಣ್ಣೆಯೇ ಪಾಲಿಶಾಗಿತ್ತು.. ಬಿಳಿ ಬೂಟಿಗೆ ಚಾಕ್ ಪೀಸ್ ನ ಲೇಪನ ಇತ್ತು..!
ಶನಿವಾರದ ಪಿ.ಟಿ ಗೆ , ಅಡ್ಡಾದಿಡ್ಡಿ ಯಾಗಿ ಬೆಳೆದ ಉಗುರ ಕತ್ತರಿಸಲು ಮರೆತಾಗ , ಗುರುಗಳ ಏಟಿನ ಭಯಕ್ಕೆ ಹಲ್ಲುಗಳೇ ಕಟ್ಟರ್ ಆಗಿದ್ದವು..!

ತಪ್ಪು ಮಾಡಿದೊಡನೆ , ಬೆತ್ತದ ರುಚಿ ಕಾಣುವ ನೋವಿನ ಸುಖವಿತ್ತು..!
ಗುರುಭ್ಯೋ ನಮಃ ಎಂಬ ಅತ್ಯುನ್ನತ ಪಾಠವಿತ್ತು..!
ಶಾಲೆಗೆ ಕಾಲ್ನಡಿಗೆಯ ಪ್ರಯಾಣವಿತ್ತು , ತಾಮ್ರದ ಅಥವಾ ಸ್ಟೀಲ್ ನ ಊಟದ ಡಬ್ಬಿಯಿತ್ತು..!
ಶಾಲೆಯಲ್ಲಿ ಆಟ-ಪಾಠಗಳು ಎರಡು ಒಂದೇ ಎಂಬ ಭಾವನೆಯಿತ್ತು..!
ತುಂತುರು, ಚಂದಮಾಮ, ಬಾಲ ವಿಜಯ ಎಂಬ ಪುಸ್ತಕಗಳೇ ಗೆಳೆಯರಾಗಿದ್ದರು..!
ಭಾನುವಾರದ ಸಾಪ್ತಾಹಿಕ ಪುರವಣಿಗಾಗಿ ಕಾಯುವ ಹಂಬಲವಿತ್ತು..!

ಊರ ಹಬ್ಬಕ್ಕೆ, ಶಾಲೆಯ ರಜೆಯಿತ್ತು.. ಹಬ್ಬಕ್ಕೆ ಜಾತ್ರೆಯ ಆಗಮನವಿತ್ತು.. !
ಜಾತ್ರೆ ಯಲ್ಲಿ ಬರುವ ಆಟಿಕೆಗಳಿಗೆ, ಅತೀವವಾದ ಕಾಯುವಿಕೆ ಇತ್ತು..!
ಎರಡು ರುಪಾಯಿಯ ಬಣ್ಣ ಬಣ್ಣದ ಬಲೂನ್ ಗಾಗಿ , ಅಮ್ಮನ ಬಳಿ ದೊಡ್ಡ ಬೇಡಿಕೆಇತ್ತು..!
ಯಾವ ಬಣ್ಣದ್ದು ಕೊಂಡುಕೊಳ್ಳುವುದು ಎನ್ನುವ ಗೊಂದಲವಿತ್ತು..!
ಆಟವಾಡುತ್ತಾ ಅದು ಹೊಡೆದು ಹೋದೊಡೆನೆ, ಅಳುವ ನೋವಿತ್ತು..!
ಅದೇ ದೊಡ್ಡ ಆಟಿಕೆ ಎಂಬ , ತಿರುಕನ ಕನಸಿತ್ತು,.!

ಖಾಲಿ ರಸ್ತೆಗಳ ದರ್ಬಾರಿತ್ತು , ಪತ್ರಗಳ ಸಂಚಾರವಿತ್ತು , ಕಾಲ್ ನಡಿಗೆಯ ಸುಖವಿತ್ತು, ಹಬ್ಬ ಹರಿದಿನಗಳ ವಿಜೃಂಭಣೆ ಇತ್ತು..!
ರಜೆ ಬಿಟ್ಟೊಡನೆ , ಅಜ್ಜಿ ಮನೆ ಎಂಬ ಕಾಲವಿತ್ತು..!
ಗೆಳೆಯರೊಡನೆ ಕೂಡಿ ಹುಣಸೇಮರ , ಮಾವಿನ ಮರವೆಂಬ ಶಿಕಾರಿಯ ತಿರುಗಾಟವಿತ್ತು..!
ಎಲ್ಲೋ  ಕಾಣುವ ಒಂದೊಂದು ಕಾರ್ ಅನ್ನು ಕಂಡು  , ಅತೀವ ಖುಷಿಯಿಂದ ಅದರ ಹಿಂದೆ ಹಿಂದೆ ಓಡಿ ಸಂಭ್ರಮಿಸುವ ಶ್ರೀಮಂತಿಕೆಯಿತ್ತು..!

ಅಡುಗೆ ಮನೆಯಿಂದ ಕದ್ದು ತರುವ ಸಾಮಗ್ರಿಯಿಂದ ಮಾಡುವ ಕುಟ್ಟುಉಂಡಿ ಇತ್ತು..!
ಬಿದ್ದ ಹುಣಸೆ ಹಣ್ಣು, ಪ್ಯಾರಲೆ, ಹತ್ತಿ ಹಣ್ಣನ್ನು  ತೊಳಿಯದೆ ತಿನ್ನುವ ರುಚಿಯಿತ್ತು..!

ಅಜ್ಜ ಅಜ್ಜಿ, ಅತ್ತೆ ಮಾವ, ದೊಡ್ಡಪ್ಪ- ದೊಡ್ಡಮ್ಮ , ಚಿಕ್ಕಪ್ಪ -ಚಿಕ್ಕಮ್ಮ , ಅಣ್ಣ ಅತ್ತಿಗೆ , ಅಕ್ಕ-ತಂಗಿ ಎಲ್ಲಾ ಹೆಸರುಗಳು ಇದ್ದವು..!
ಜೊತೆಯಾಗಿ ಹೋಗಿ ನೋಡಲು ಟೆಂಟ್ ಸಿನಿಮಾದ ಪ್ರದರ್ಶನವಿತ್ತು ..!
ಮನೆ ಒಳಗಿನ ಬೆಳಕಿಗೆ ಗವಾಕ್ಷಿಯ ಅಪ್ಪಣೆಯಿತ್ತು ..!
ಅಭ್ಯಂಜನಕ್ಕೆ ಕಟ್ಟಿಗೆ ಉರಿಯ ಅಡ್ಡೆವಿನ  ಅಪ್ಪುಗೆಯಿತ್ತು ..!


ಸುಡುವ ಬೇಸಿಗೆಗೆ ತಿಂಡಿಗಳ ತಯಾರಿ ಜೋರಾಗಿಯೇ ಇತ್ತು..!
ತರತರಹದ ಸೊಂಡಿಗೆ, ಅಪ್ಪಳ, ಉಪ್ಪಿನಕಾಯಿಯ ಹಾವಳಿ ಇತ್ತು..!
ಪಾಳಿಯಲ್ಲಿ ಹೋಗಿ ಮಾಳಿಗೆ ಮೇಲೆ ಒಣಗಿಹಾಕಿ ಬರುವ ಸರದಿ,ಮನೆ -ಮಕ್ಕಳದಾಗಿತ್ತು,.!

ಊರಿಂದ ವಾಪಸ್ಸಾಗುವಾಗ , ಅಜ್ಜಿ ಕೊಡುವ ರೂಪಾಯಿ ದುಡ್ಡಿತ್ತು..!
ಬಸ್ ಸ್ಟಾಪ್ ಗೆ ಹೋಗಲು ಅಜ್ಜನ ಹೆಗಲಿತ್ತು..!

ಬರೆಯುತ್ತಲೇ , ಎಷ್ಟೋ ನೆನಪುಗಳು ನುಸಳಿ ಹೋಗುತ್ತಿವೆ.. ಪೂರ್ವ 2000 ನೇ ಇಸವಿ ಮಕ್ಕಳ ಅದೃಷ್ಟದ ದಿನಗಳು ಇವು ಎಂದು ಮನವರಿಕೆಯಾಗುತ್ತಿದೆ.
ನಿಧಾನವಾಗಿ ಆಧುನಿಕತೆ ಎಂಬ ಮಾಂತ್ರಿಕನ ಮಾಯಾಜಾಲಕ್ಕೆ ಅದೆಂತು ಬಿದ್ದೆವೋ ..?!
ಅಂದು ಅದು ಅವಶ್ಯಕತೆ ಇರಬೇಕು, ಆದರೆ ಈಗ ತಿರುಗಿ ಹೋಗಬೇಕೆಂದರೂ ಈಗ ಅನಿವಾರ್ಯತೆಯೆಂಬ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ !!

ಬೆಳೆದು ನಿಂತ ನಾವುಗಳೇ , ಗೊತ್ತೋ ಗೊತ್ತಿಲ್ಲದೆಯೋ . ನಾವು ನಡೆದು ಬಂದ ರೀತಿಯಿಂದ ನಾವೇ ದೂರ ಉಳಿಯುತಿದ್ದೇವೆ ..!! ಸ್ಟೇಟಸ್ ಎಂಬ ಹುಂಬತನವೋ ಅಥವಾ ದಡ್ಡತನವೋ ಗೊತ್ತಿಲ್ಲ,..??

ಹಳ್ಳಿಗಳ ಪರಿಚಯವೇ ಮರೆತ ಈ ಪೀಳಿಗೆಗೆ ಏನೆಂದು ಹೇಳಲಿ..,
ಮುಗ್ಧತೆಯ ಜೀವನ ಶೈಲಿ ಇಂದ ದೂರ ಸರಿದಿರುವ ನಮ್ಮನ್ನು , ದುರದೃಷ್ಟರೆನ್ನುವುದೋ   ?? ಅಥವಾ ಬಯಸಿದ್ದಿಕ್ಕಿಂತ ಹೆಚ್ಚಾಗಿ ಸಿಗುತ್ತಿರುವ ಸೌಕರ್ಯಗಳಿಗೆ , ಅದೃಷ್ಟವಂತರೆನ್ನಬೇಕೋ ??

ಮನಸಿನ ಮೂಲೆಯಲ್ಲಿ , ನಾವೆಲ್ಲಾ ಕೊರಗುತ್ತಿದ್ದೇವೆ .. ನಮ್ಮ ಮಕ್ಕಳಿಗೆ .., ನಾವು ನಡೆದು ಬಂದ ದಾರಿಯನ್ನು ಹೇಳಿಕೊಡಬೇಕೆಂದು.. ಆದರೆ ಅದ್ಯಾವ ಶಕ್ತಿ ತಡೆಯುತ್ತಿದೆಯೋ? , ಪರಮಾತ್ಮನೇ ಬಲ್ಲ,..!!

ನಮ್ಮ ಕಾಲದಲ್ಲಿ ಹೀಗಿತ್ತು ಎಂದರೆ,  ಈ ಪೀಳಿಗೆಯವರು ನಂಬಲಾಗದಷ್ಟು ಸೋಜಿಗವೆಂಬ  ಉತ್ತರ ದೊರೆಯುವಷ್ಟು ದೂರ ಸರಿದಿರುವೆವು..,
ಅರಿವಾಗುವುದೆಂತು ..?, ಆ ಸ್ವರ್ಗದ ದಿನಗಳು ... ಮರೆತು ಹೋದ ಅಜ್ಜಿ ಮನೆ ಎಂಬ ಸಂಬಂಧಗಳ ನಡುವೆ...!!


..............
ಹತಾಶೆಯ ನಿಟ್ಟುಸಿರ ಮೌನದಲಿ,
ಇಂತಿ ನಿಮ್ಮ,
.ಪೂರ್ಣಚಂದ್ರ
.Pavitra Nagendrappa
೫-೧೦-೨೦೧೯
ಕೊಟ್ಟೂರು.





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನಪ್ಪನ ಕ್ಯಾಮೆರಾ..

ಹೀಗೊಂದು ೨೦೧೯ ರ ಬದುಕು...!!

ದೈತ್ಯ..