ಹೀಗೊಂದು ೨೦೧೯ ರ ಬದುಕು...!!




ಹೀಗೊಂದು ೨೦೧೯ ರ ಬದುಕು...!!



ಆಚರಣೆಗೂ ಹೆಸರಂತೆ,
ನಮ್ಮ ಸಂಸ್ಕೃತಿಯಲ್ಲದ ದಿನವಿದು, ಯುಗಾದಿ ನಮ್ಮ ದಿನವೆಂದು...!! ಕಿತ್ತಾಡುವುದಕ್ಕಿಂತ, ವರುಷದಲ್ಲಿ ಎರಡೆರಡು ಬಾರಿ ಹೊಸ ವರುಷದ ಆಚರಣೆ ನಮ್ಮದು ಎಂದುಕೊಂಡು ಬಿಟ್ಟರೆ , ನಾವೇ ಧನ್ಯರು ಅನಿಸುವುದಿಲ್ಲವೇ?!
   ಏನಾದರೂ ಸರಿ,2019 ಕ್ಕೆ ಮೊದಲನೇ ವಿದಾಯ ಹೇಳುವ ಪರಿ ಇದು ಎಂದು ಭಾವಿಸಿ ಅದರೆಡಗಿನ ಒಲವನ್ನು ಬಿಂಬಿಸಲು, ಅಂತರಾತ್ಮದ ಆಳವನ್ನು ಸಾಲುಗಳಾಗಿಸುತ್ತಿದ್ದೇನೆ.
 ನನ್ನ ಈ ಜೀವನದಲ್ಲಿ, ಈ ವರುಷವನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ, ಶುರುವಿನಿಂದಲೂ , ಅಂದುಕೊಂಡಿದ್ದೆಲ್ಲ ಅನೇರವಾಗಿ ನಡೆಯುತ್ತಲೇ ಹೋಯಿತು..! ಶ್ರಮವೆಲ್ಲ ವ್ಯರ್ಥ ಎನಿಸುವುದೇ ಮುನ್ನುಡಿಯಾಗಿ  ಹೋಯಿತು.
   ತಿರುಗಿ ನೋಡಿದರೆ,
ಉಸಿರು ಕಟ್ಟಿ, ಇನ್ನೇನು ಬದುಕಲಾರೆ ಎನ್ನುವಷ್ಟರ ಮಟ್ಟಿಗೆ ವಿಧಿ ನನ್ನೆಡೆಗೆ ಕುಪಿತನಾಗಿದ್ದನೆನಿಸುತ್ತದೆ, ಅಯ್ಯೋ ಪರಮಾತ್ಮ, ಕರುಳು ಕಿವುಚಿ ಬರುವಷ್ಟು ನೊಂದು, ಒಂಟಿತನ ಕಾಡಿದೆ!!
   ಆ ಸಮಯದಲ್ಲಿ, ಮೌನದ ತೀವ್ರತೆ ಹೆಚ್ಚಾದಾಗ, ಕೈ ಹಿಡಿದು ನಡೆಸಿದ್ದು , ನಾ ಅತಿಯಾಗಿ ಮೆಚ್ಚಿರುವ ನಮ್ಮ ಸಾಹಿತ್ಯ!
  ಮೂಕಂ ಕರ್ವಾತಿ ವಾಚಲಂ, ನನ್ನ ಜೊತೆ ಜೊತೆಗೆ ನಡೆಯುತ್ತಿರುವ ಸಂಗಾತಿ, ಸಾಹಿತ್ಯ !!
     ಹೇಳುವುದಿಷ್ಟೇ , ಗೊತ್ತಿಲ್ಲದೆ ಏನೇನೋ ಸನ್ನಿವೇಶಗಳು ಬರುತ್ತವೆ, ಡಿಪ್ರೆಶನ್, ಒಂಟಿತನ ಎನ್ನುವ ಅನರ್ಥ ಪದಗಳು ಸುಮ್ಮನೆ ಜಂಟಿಯಾಗಿಬಿಡುತ್ತವೆ, ಹುಚ್ಚು ವ್ಯಸನಗಳಿಗೆ ದಾಸರಾಗದೆ, ಶಂಕೆಯಿಲ್ಲದೆ ಪುಸ್ತಕಗಳನ್ನು ನಂಬಿಬಿಡಿ, ಅವು ನಮ್ಮ ಆತ್ಮ ಶುದ್ಧಿಯನ್ನು ಮಾಡುತ್ತಾ ಹೋಗುತ್ತವೆ!! ಗೊತ್ತಿಲ್ಲದೆ ಸದಾ ಕಾಲ ಬಳಿಯಲ್ಲೇ ಇರುವ ಸಂಗಾತಿಯಾಗುತ್ತವೆ,
         ೨೦೧೯ ಹಾಗೆಯೇ, ಕೋಶದ ಒಡನಾಟದ ಜೊತೆಗೆ , ತಿರುಗಾಟದ ಹುಚ್ಚು ಶುರುವಾದ ಕಾಲವಿದು, ಗೋವಾ,ರಾಜಸ್ಥಾನ,ಚಿತ್ರದುರ್ಗ,ಮೈಸೂರು, ಎಲ್ಲವನ್ನು ಭರ್ಜರಿಯಾಗಿ ನನ್ನ ಅಚ್ಚುಮಿಚ್ಚಿನ ಸಂಗಡಿಗರೊಂದಿಗೆ ತಿರುಗಾಡಿದ್ದು ಆಯಿತು.
    ಹೌದು, ಪ್ರಪಂಚ ವಿಶಾಲವಾಗಿದೆ, ಹೊಸ ಜಾಗಗಳ ಅನಾವರಣ ಆಗಲೇಬೇಕು, ಅವರ ಆಚಾರ ವಿಚಾರ, ಸ್ಥಳಗಳ ಬಗ್ಗೆ ತಿಳಿದಷ್ಟು ಜೀವನದ ಮೇಲೆ ಅದೇನೋ ಹುಮ್ಮಸ್ಸು ಬೆಳೆಯುತ್ತದೆ. ಅದನ್ನು ನಾನು ಅರಿತು, ನನ್ನನ್ನೇ ನಾನು ಕಂಡುಕೊಂಡೆ!! ಪ್ರಯಾಸದ ಪಯಣ ಎಂದು ಬಿಟ್ಟರೆ, ಜೀವನದ ತಿರುಳನ್ನೇ ಬಿಟ್ಟ ಹಾಗೆ!! ಅದಕ್ಕಾಗಿ, ಹೋಗಿ ಒಮ್ಮೆ, ಸುತ್ತಿ ಬನ್ನಿ.. ಮತ್ತೆ ಮಗುವಾಗುವಿರಿ ಹುಮ್ಮಸ್ಸಿನೊಡನೆ.!
     
ಪರಮಾತ್ಮನ ಒಡನಾಟವನ್ನು ಅತಿಯಾಗಿ ಬಯಸುತ್ತಿದ್ದ ಎನಗೆ, ಸೂರ್ಯನ ನಿರಂತರ ಉದಯಗಳು ಬಿಟ್ಟರೆ, ಇನ್ನೆಲ್ಲಾ ಕತ್ತಲೆ ಎನಿಸುತಿತ್ತು ಒಮ್ಮೊಮ್ಮೆ. ನನ್ನ ಪರಮಾತ್ಮ ಹೇಳಿಕೊಟ್ಟಂತೆ, ಸಮಾಜಕ್ಕಾಗಿ ನೀನು ಎನ್ನುವುದ ಅರಿತು, ಅಪ್ಪನಿಗಾಗಿ , ಅವರ ಊರಿನಲ್ಲಿ ನಡೆಸಿದ ಕಾರ್ಯಕ್ರಮದ ಅಲ್ಪ ಕಾಣಿಕೆಯ ಖುಷಿಯನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ.

  ಇದೆಲ್ಲದರ ನಡುವೆ, ನನ್ನನ್ನೇ ಅಚ್ಚರಿ ಆವರಿಸದಂತೆ, ನಾನು ಕಳೆದುಕೊಂಡೆ ಎಂದು ಭಾವಿಸಿದ್ದ ನನ್ನ ಆತ್ಮ ನಗು  ಮತ್ತೆ ನನ್ನನ್ನು ತಬ್ಬಿಕೊಂಡಿತ್ತು.
   ಅಂದುಕೊಂಡಿದ್ದೆಲ್ಲ, ನಿಜವಾಗುತ್ತದೆ, ಬಯಸುವುದೆಲ್ಲಾ ಸಿಗುವುದು, ಯಾವಾಗ ನಿಸ್ವಾರ್ಥತೇ ಮತ್ತೆ ಸರ್ವೇ ಜನ ಸುಖಿನೋ ಭವಂತು ಎನ್ನುವುದು ಮಂತ್ರವಾಗಿರುತ್ತದೋ , ಅಂತೇ ಮಾತ್ರ!
   ನಾ ನಂಬುವ ಆರಾಧ್ಯನಿಗೆ ಗೊತ್ತು, ಪವಿತ್ರ ಬಂಧನಕ್ಕೆ ಶ್ರೇಯಸ್ಸು ಒದಗಿ ಬರುವುದೆಂದು, ಅಂತೆಯೇ,,
ನನ್ನನ್ನು ಪೂರ್ಣ ಎಂದು ಕರೆದು , ಚಂದ್ರನಂತೆ ಆವರಿಸಿ, ಪೂರ್ಣಚಂದ್ರವೆಂಬ ಅಂಕಿತವಿರಿಸಿ , ಹೀಗೊಂದು ಬದುಕು ಸೃಷ್ಠಿಸಿದ ವರುಷವಿದು.

ಪಟ್ಟ ಶ್ರಮ , ಬಯಸಿದ ಒಳಿತು,ಹರಸಿದ ಕೈಗಳು , ನೊಂದವರನ್ನು ತಬ್ಬಿ ಒಳಿತನ್ನು ಹೇಳಿದ್ದು, ಕ್ಷಮೆ ಕೇಳಿ ಬಂದವರಿಗೆ , ನೋವಾಗದಂತೆ ಹೆಗಲ ಮೇಲೆ ಕೈಯಿರಿಸಿ ಮತ್ತೆ ಹೆಜ್ಜೆ ಶುರು ಮಾಡಿದ್ದು, ಹೊಸ ಬಾಳಿನ ಸೇತುವೆಯೇ ಆಗಿದೆ.

ಇದು ನನ್ನದಷ್ಟೇ ಕಥೆಯಲ್ಲ, ಎಲ್ಲರ ವೈಯಕ್ತಿಕವೂ ಹೌದು.
ಅವಿರತ ಶ್ರಮ, ತಾಳ್ಮೆ ಮತ್ತು ಮೌನವನ್ನು ತಬ್ಬಿಬಿಡಿ.. ನೆಮ್ಮದಿ ನಿಮ್ಮನ್ನೇ ಅರಸುವುದು.

 ಬದುಕಿನ ಹೆಜ್ಜೆಯಲ್ಲೂ, ನೋವು ನಲಿವು ಬಿಟ್ಟು ಬಿಡದ ಅತಿಥಿಗಳು!

ಪರಮಾತ್ಮ ಹೇಳಿಕೊಟ್ಟಿರುವ, ಸರಳವಿದು ಬದುಕು.. ನೀನು ನೀನಾಗಿ ಇದ್ದಾರೆ ಮಾತ್ರ!!
೨೦೧೯ ದೊಡ್ಡ ಪಾಠದ ಅಚ್ಚರಿಯೊಂದಿಗೆ ಬಂದು, ನೆಮ್ಮದಿ ತಂದಿದೆ, ಆಗಿದ್ದನ್ನು ಹಾಗೆಯೇ ಬಿಟ್ಟು ಮುಂದೆ  ನಡೆಯಿರಿ...

ಇದ್ದಷ್ಟು ಮಾತ್ರವೇ ಕಾಲುಚಾಚು.
ನೀನು ನೀನಾಗು ಮೊದಲು, ಉಸಿರಾಡುತ್ತಿದ್ದೆವಲ್ಲ , ಅದುವೇ ಉತ್ಕೃಷ್ಟ!
೨೦೨೦ ಶುಭ ತರಲಿ ನಿಮಗೆ..
ಪೂರ್ಣ_ಚಂದ್ರ ರು ಹರಸುವ,
ಶುಭ ವರುಷ 2020

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನಪ್ಪನ ಕ್ಯಾಮೆರಾ..

ದೈತ್ಯ..