ನಾ ಕಂಡ ಕುಪ್ಪಳ್ಳಿ..


ನಾ ಕಂಡ ಕುಪ್ಪಳ್ಳಿ..





ಕನ್ನಡ-ಕವಿಗಳು , ಸಾಹಿತ್ಯ ಎಂದರೆ ನನ್ನೊಳಗಿನ ಪುಟ್ಟ ಹೃದಯದಲ್ಲಿ ಅದೇನೋ ಮಾರ್ಧ್ವನಿ.. ಕದನ ಮುಕ್ತಾಯದ ಕೌತುಕವಷ್ಟು  ಆತುರಾತುರವಾಗಿ ಕನ್ನಡ ಪುಸ್ತಕ ಓದಿ ಮುಗಿಸುವಷ್ಟು ಅಭಿಮಾನ.
                        ಬಯಲುಸೀಮೆಯವಳಾದ ನನಗೆ, ಅದೇಕೋ ಮಲೆನಾಡಿಗೆ ಶಿರಶಾಸ್ಟಾಂಗ ನಮಸ್ಕಾರ  ಮಾಡಿ, ಮೈಮರೆತಿರುವ ಅತೀವ ಭಕ್ತನ ಒಡಲಾಳದ ಮನಸ್ಸಿನಂತೆ...
     ಪೂರ್ಣ ಚಂದ್ರ ತೇಜಸ್ವಿ ನನ್ನ ಆರಾಧ್ಯ ದೈವ. ಅವರು ನನ್ನ ಪುಸ್ತಕ ಪ್ರೇಮವನ್ನು ಹಿಡಿದಿಟ್ಟಿರುವ ಮಹಾನ್ ದೈತ್ಯ.,  ನನಗಷ್ಟೇ  ಅಲ್ಲಾ , ಪ್ರತಿ ಕನ್ನಡಿಗನನ್ನು  ಕೂಡ!, ಏಕೆಂದರೆ ಅವರ ವ್ಯಕ್ತಿತ್ವವೇ ಹಾಗೆ..

    ಅಪ್ಪನಂತೇ ಅಲ್ಲಾ ಅವರು!!    ಅವರ 'ಪರಿಸರದ ಕತೆಗಳು' ಓದುವಾಗ ಕಣ್ಣ ಮುಂದೆ ಹಾದುಹೋಗುವ ಸಾಹಿತ್ಯದ ಚಿತ್ರಣ ಕಂಡು, ಒಬ್ಬ ಮನುಷ್ಯ ಹೀಗೆಲ್ಲಾ ಬರೆಯಲು ಹೇಗೆ ಸಾಧ್ಯವೆಂದಾಗ , ನಾನ್ನುಡಿಯಂತೆ 'ಅಪ್ಪ ಹಾಕಿದ ಹಾಲದ ಮರದಂತೆ' ಇರಬಹುದೇನೋ , ಆದರೆ ಆಲದ ಮರದ ಬೇರಲ್ಲಿ, ಕಾಡಿನ ಔಷದಿ ಚಿಗುರೊಡೆದದ್ದು ಹೇಗೆ? ಎಂದು ಕೂಡ ಅನ್ನಿಸಿ ತರಾಟೆ ಯಾಕೆ., ಅಪ್ಪ-ಮಗನ ಸಾಹಿತ್ಯದ ದೇಣಿಗೆ ..ಕನ್ನಡ ನಾಡು ಸವಿದರು ಸಾಲದ ಕುಡಿಕೆ ಹೊನ್ನನ್ನು , ಅವರಿಬ್ಬರ  ಕಣ್ಣಲ್ಲಿ ಕಂಡ ಜಾಗ-ಯುಗದ ರಚನೆಯನ್ನು ಓದೋಣ ಎಂದು ಭಾವಿಸಿ , ಕುವೆಂಪುರವರ ಮಲೆಗಳಲ್ಲಿ ಮದುಮಗಳನ್ನು ಓದಿದೆ, ಆದರೆ ತೇಜಸ್ವಿ ಅವರ ಜುಗಾರಿ ಕ್ರಾಸ್ ಸಾಹಿತ್ಯಕ್ಕ್ಕೂ, ಕುವೆಂಪುರವರ ಸಾಹಿತ್ಯಕ್ಕೂ ಪರಾಮರ್ಶೆ ಅಸಾಧ್ಯ.. ಯಾವ ಹಣ್ಣು ಎಷ್ಟು ರುಚಿ ,.. ಹೇಳಲು ಅಸಾಧ್ಯ !! ವಿನಃ ಕನ್ನಡಿಗರ ಅದೃಷ್ಟ ವಷ್ಟೇ ಎನ್ನಬಹುದು ..ಆಳ-ಲಾಳಾಗಲ ವಿಭಿನ್ನ ಅಭಿರುಚಿ ಒಳಗೊಂಡ ಮನುಷ್ಯರಿಗೆ, ಕುಪ್ಪಳ್ಳಿಯ ಕುಡಿಗಳು ರಸಸಾರವನ್ನೇ ಹರಿಸಿದ್ದಾರೆ ಎಂದರೆ ತಪ್ಪಾಗಲಾರದು ..

ಕನ್ನಡ ಪರ ಇಂಗಿತವಿರುವ ನನಗೆ ಎಲ್ಲವನ್ನು ಓಡಿತಿಳಿದುಕೊಳ್ಳುವಾಸೆ . ತೇಜಸ್ವಿ ಅವರ  ವಿಭಿನ್ನತೆಯಿಂದ, ಕುವೆಂಪುರವರ ರಚನೆಯ ಮಡಿಲಿಗೂ ಬಿದ್ದದಾಯಿತು!! ಕಾಡಿನ ಸೌಂದರ್ಯ ರಾಶಿಯಲ್ಲಿ ಬೆಳೆದ ಒಂದು ಕುಡಿ, ಕಾಡು ಕ್ಷೀಣಿಸುತ್ತಿದೆ ಎಂದು ಮುನ್ನುಗುತ್ತಿದ್ದ ಯಾಂತ್ರಿಕ ಬದುಕಿಗೆ ಬೀಗ ಹಾಕಿ , ಪರಿಸರದ ಮಡಿಲಿಗೆ ಬಿದ್ದದ್ದು ಇನ್ನೊಂದು ಕುಡಿ. ಉಚ್ಚರಿಸುವಂತೆ "ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ , ನಾವು ಪ್ರಕೃತಿಯ ಒಂದು ಭಾಗ"!
           ಮಲೆಗಳಲ್ಲಿ ಮದುಮಗಳು ಓದುತ್ತಾ, ಇದ್ಯಾವ ಭಾಷೆ, ಕನ್ನಡದ  ಮೂಲವನ್ನೇ ಹೊಂದಿದೆ, ಇದ್ಯಾವ ಆಚರಣೆಗಳು -ಈಗಲೂ ಈ ಆಚರಣೆಗಳು ಅಸ್ತಿತ್ವದಲ್ಲಿ ಇವೆಯಾ ? ಹೀಗೂ ಇತ್ತಾ ಬದುಕಿನ ಶೈಲಿ ?ಕೇವಲ ಒಂದು ಪೀಳಿಗೆಯ ವ್ಯತ್ಯಾಸದಿಂದ ಸುತ್ತಲಿನ ಪರಿಸರದಿಂದಿಡಿದು , ಆಚರಣೆ , ಜೀವನ ಶೈಲಿ ಎಲ್ಲ ಬದಲಾಗಿದೆ. ಪಾಶ್ಚತ್ಯದ ಆಗಮನ ಇಷ್ಟು ದುಸ್ತರವೆಸಗಿದೆಯೆಂದೆಣಿಸಿ, ಯಾಕಾದರೂ ಈ ಪೀಳಿಗೆ ಬಂದಿತೋ ಎಂಬ ಕ್ಲಿಷೆ ಉಂಟಾಗುತ್ತದೆ.
 
 ಈ ತುಲನೆ , ಮತ್ತೆ ಹಳೆ ಕಾಲವನ್ನು ಓದಿ ಆದರೂ ತಿಳಿದು ಕೊಳ್ಳುವಂತಹ ಸ್ಪೂರ್ತಿಯಾಗಿದೆ.
    ಯೋಚನಾಲಹರಿಯಿಂದಿಡಿದು , ಜೀವನ ಶೈಲಿಯವರೆಗೂ ಒಂದೇ ಪೀಳಿಗೆಯಲ್ಲಿ ಅಗಾಧ ಬದಲಾವಣೆಗಳೊಳಗೊಂಡಿದ್ದ ಕುವೆಂಪು-ತೇಜಸ್ವಿ ಅವರ ಆಸರೆ ಬಯಸಿ , ತೇಜಸ್ವಿ ಅವರ 'ಅಣ್ಣನ-ನೆನಪು' ಓದಲು ಶುರುಮಾಡಿದೆ.
     ಬರೆದ ಪ್ರತಿಸಾಲು , ಆಗಿನ ಕಾಲಘಟ್ಟ ದ ವರ್ತಮಾನ, ಪದೇ ಪದೇ ನಮೂದಿಸಿದ್ದ ಕವಿಶೈಲ -ಕುಪ್ಪಳ್ಳಿ ಮನೆ  ನನ್ನನ್ನು ಆಕರ್ಷಿಸಿದವು. "ನೋಡುವುದಲ್ಲ- ಒಮ್ಮೆ ಕಾಣಬೇಕು ಕವಿಶೈಲ-ಕವಿಮನೆ "ಎನ್ನುವ ವಾಕ್ಯ ಕಿವಿನಿಮಿರಿಸಿತು.
       ಪ್ರಪಂಚ ಸುತ್ತುವ ಹೆಬ್ಬಯಕೆ ಇಟ್ಟುಕೊಂಡಿರುವ ಗೆಳೆಯರ ಬಳಗ ನನ್ನದು, ನಾನೊಬ್ಬಳೇ ವಿಭಿನ್ನ .. ಎಲ್ಲಿಯೂ ಸಾಮಾನ್ಯವಾಗಿ ಹೋಗಲ್ಲ., ಆದರೆ ಕವಿಮನೆಗಾಗಿ ಇವರನ್ನು ಹೊರಡಿಸಲೇಬೇಕಾಯಿತು.
     ದೇಶ ಸುತ್ತು ಕೋಶ ಓದು ಎನ್ನುವುದರಲ್ಲಿ ನಂಬಿಕೆ ಇರುವ ನನ್ನ ದೀರ್ಘಕಾಲದ ಬಂಧು , ಪ್ರತಿಯೊಬ್ಬರು ನೋಡಲೇಬೇಕಾದ ಸ್ಥಳ ಕುಪ್ಪಳ್ಳಿ ಎಂದಾಗ, ಇನ್ನೂ ಕಾಯದಾದೆ.
        ಅಂತೂ -ಇಂತೂ , ಅಲ್ಲಿ-ಇಲ್ಲಿ ಕೇಳಿ ಕೊನೆಗೂ ನನ್ನ ಆತ್ಮೀಯ ಗೆಳೆಯರ ಬಳಗ ೨೦೧೭ರ ಅಂತ್ಯದಲ್ಲಿ ಅಂದರೆ ಡಿಸೆಂಬರ್ ೩೦ರಂದು ಹೊರೆಟೆವು . ಆಗಲೇ ಕುಪ್ಪಳ್ಳಿಯನ್ನು ಕಂಡಿದ್ದ ಅವರು , ಸೂರ್ಯಾಸ್ತವನ್ನು ಅಲ್ಲಿಯೇ ನೋಡಬೇಕೆಂದರು . ಕವಿಮನೆ ಸ್ವರ್ಗ , ಹಾಗೆ-ಹೀಗೆ ಹೇಳುವಾಗ ಅಯ್ಯೋ !! ನನ್ನ ಕೌತುಕ ಹೇಳಲಸಾಧ್ಯ .. ದಾರಿಯುದ್ದಕ್ಕೂ ಆಚೆ-ಈಚೆ ಕಾಣುತಿದ್ದ ಹಸಿರುರಾಶಿ ಕಂಡು, ತೇಜಸ್ವಿ ಅವರ ಅಣ್ಣನ ನೆನಪಿನಲ್ಲಿ ನಮೂದಿಸಿದ್ದ ಕಾಡಿನ ರಾಶಿ ಯನ್ನು ಹಾಗೆ, ಮದುಮಗಳನ್ನೇ ಅಡಗಿಸಿಕೊಂಡಿದ್ದ ಕಾಗಿಣಾದ ಸನ್ನಿವೇಶವನ್ನು ಮನಸ್ಸೆಂಬ ಕೃತಿಯಲ್ಲಿ ಹಾಳೆಯ ಮುದ್ರಣ ಒತ್ತುತ್ತಲೇ ಇತ್ತು..
  ಹಾಗೆಯೇ, ಸೂರ್ಯ ಜಾರುವ ವೇಳೆಗಿಂತ ಮುಂಚೆಯೇ ಕವಿಶೈಲ ತಲುಪಿದೆವು. ಕಾರಿನಿಂದ ಇಳಿದು , ಒಂದೊಂದೇ ಮೆಟ್ಟಿಲು ಹತ್ತುವಾಗ ಕೂಗುವ ಕಾಜಾಣ ನನ್ನೊಳಗಿನ ಸಾಹಿತ್ಯಾಭಿಮಾನವನ್ನು ಸ್ವರ್ಗಕ್ಕೆ ಆಹ್ವಾನಿಸುತಿತ್ತು !! ನಾವು ಹೋಗಿದ್ದ ಹಿಂದಿನ ದಿನ ಕವಿಗಳ ಹುಟ್ಟುಹಬ್ಬದ ದಿನವಾಗಿದ್ದರಿಂದ , ಭೂಮಿಯ ಗರ್ಭದಲ್ಲಿ ಚಿರನಿದ್ರಿಸುತ್ತಿದ್ದ ಕವಿಗೆ ಅವರು ಇಷ್ಟಪಟ್ಟ ಕವಿಶೈಲದ ಕಲ್ಲುಗಳು ಮೆತ್ತನೆಯ ಹಾಸಿಗೆಯ ತಂಪೇ ಅತೀವವಾಗಿತ್ತು ,ಮೇಲೆ ಒದೆಸಿದ್ದ ಪುಷ್ಪಗಳ ಹಾರಗಳಿಗಿಂತ !!..
     ಹೌದು!! ಹೆಜ್ಜೆ ಇಡುತ್ತಿದ್ದಂತೆಲ್ಲಾ ನನ್ನ ಮೈ ರೋಮಾಂಚನವಾಗುತ್ತಿತ್ತು! ಅವರು ಬರೆದ ಪ್ರತಿ ಸಾಲು ನನ್ನ ಉಸಿರಿಗೆ ಬೆಲೆ ಕೊಡುತ್ತಿತ್ತು .. ಕವಿಶೈಲದ ಬಗ್ಗೆ ಬರೆದ ಪ್ರತಿ ಸಾಲು ಗೀತೆಯಷ್ಟೇ ಪವಿತ್ರವಾಗಿತ್ತು..
      ಕವಿಯ ಹಸ್ತಾಕ್ಷರವಿರುವ ಪುಣ್ಯಕಲ್ಲಿನ ಮೇಲೆ ಬೆರಳಾಡಿಸಿದಾಗ , ಇಂತಹ ಸ್ವರ್ಗವನ್ನು ಬಿಟ್ಟು ದೂರದ ಉದಯರವಿಯನ್ನು ಏಕೆ ಆರಿಸಿದರು ಎನ್ನುವ ಭಾವನೆ ಮೂಡುವಷ್ಟು ಕವಿಶೈಲದ ನಾಭಿ ಎಲ್ಲರಿಗೂ ತನ್ನ ಸತ್ವ ಉಣಬಡಿಸುತಿತ್ತು ..
     ಪ್ರತಿಯೊಂದಕ್ಕೂ ಸ್ನೇಹಿತರ ಹಿಂದೆ -ಹಿಂದೆ ಓಡುತ್ತಿದ್ದ ನನಗೆ , ಕವಿಶೈಲ ಆವರಿಸಿ ಯಾರು ಕಾಣದಾದರೂ..
   ಕವಿಶೈಲ ಎಂಬ ಹಸಿರ ಸೀರೆಯ ಮುತ್ತೈದೆಗೆ ಬೆಳಗುವ ಸೂರ್ಯ ತಿಲಕ ಪ್ರತಿಷ್ಠಾಪಿಯಾಗಿದ್ದ..
    ಬೈಗೆಯಲ್ಲಿ ಕಾಜಾಣದ ಕೂಗು, ಸಂಧ್ಯಾವಂದನೆಯ ಮಂತ್ರವಾಗಿ ಕವಿಗೆ ಇನ್ನೆಷ್ಟು ಪ್ರೋತ್ಸಹ ಹಿಸಿರಬೇಕೆಂದು ಎಣಿಸುತ್ತಿದ್ದೆ.
    ಪ್ರಕೃತಿಯ ಹಾಸಿಗೆಯನ್ನು ಧ್ಯಾನದ ಆಸನವಾಗಿಸಿಕೊಂಡು , ಅದರ ಪ್ರೋತ್ಸಹವನ್ನು ಉತ್ಕೃಷ್ಟವಾಗಿ ಪ್ರಯೋಜಿಸಿಕೊಂಡ ಮಹಾನ್ ಪ್ರತಿಭೆಗೆ , ರಾಷ್ಟ್ರಕವಿ, ಜ್ಞಾನಪೀಠ ಎಂಬ ಬಿರುದುಗಳ ಮುಂದೆ , ಮಡಿಲೊಡ್ಡಿ ತಬ್ಬಿ , ಮಗನಾಗಿ ಪೋಷಿಸಿದ ಪ್ರಕೃತಿ..ಸ್ಪೂರ್ತಿ ಚಿಲುಮೆಯ ವಿಸ್ತಾರವಾದ ಕವಿಶೈಲವೇ.. ಅಮೂಲ್ಯ ಕೊಡುಗೆಯೆಂದೆನುಸುತ್ತದೆ ..
     ಸೂರ್ಯ ಜಾರುತ್ತಲೇ ಇದ್ದ , ಕವಿಶೈಲ ಕಾಡಿನ ಸದ್ದಿಗೆ ಸಾಕ್ಷಿಯಾಗುತಿತ್ತು ಅದೆಷ್ಟು ಬಾರಿ ನಮಸ್ಕರಿಸಿದೆನೋ ಈ ವಿಸ್ಮಯಕ್ಕೆ..
   ಅಲ್ಲಿಂದ ಕವಿ ಮನೆಗೆ ಹೊರಡಲು ಅನುವಾದೆವು. ಕವಿಶೈಲದಿಂದ -ಕವಿಮನೆಗೆ ಹೋಗುವ ದಾರಿಯುದ್ದಕ್ಕೂ ಪ್ರಕೃತಿಯ ಕೊಡುಗೆ ಇಷ್ಟು ಅಪಾರ ಹೇಗೆ !! ಪ್ರಕೃತಿಯನ್ನು ತಾನಿದ್ದ ಹಾಗೆ ಬಿಟ್ಟಿದ್ದರಿಂದಲೇ ಕವಿಗೆ ವರದಾನವಾಯಿತು , ಕನ್ನಡ ಸಾಹಿತ್ಯಕ್ಕೂ ವರದಾನವಾಯಿತು ಅಲ್ಲವೇ...
       
         ಗೋಧೂಳಿ ಸಮಯದ ಕತ್ತಲು, ಸುತ್ತ ಹಸಿರು-ಕಗ್ಗತ್ತಲಿಗೆ ತಿರುಗಿದ್ದರೂ , ಅರಮನೆಗೆ ಸೆಡ್ಡು ಹೊಡೆಯುವಂತಿದ್ದ ಕವಿಮನೆ ಕಂಡು ಮನ ಚಂದ್ರನನ್ನು ಕಂಡು ತೂಗುವ ಅಲೆಗಳಂತಾಯಿತು.
          ತಾಂತ್ರಿಕತೆಯ ಸ್ಪರ್ಶವಿಲ್ಲದ ಕಾಲದಲ್ಲಿ, ಅವಶ್ಯಕತೆಯ ಅನುಗುಣವಾಗಿ , ಮನೋಹರವಾಗಿ ಮಲೆನಾಡ ಮಳೆಗೆ ಮೈಯೊಡ್ಡಿ ನಿಂತಿರುವ ದೇಗುಲದಂತೆ ಕಂಡಿತು ಕವಿಮನೆ ನನಗೆ.
      ಹೆಜ್ಜೆ ಇಡುತ್ತಲೊ, ಏನೋ ವಿಸ್ಮಯ , ಏನೋ ರೋಮಾಂಚನ , ನಮ್ಮೊಡನೆ ಬಂದಿದ್ದ ಛಾಯಾಗ್ರಾಹಕನಿಗೆ ಹೇಳುತ್ತಲೇ , ಜೀವನವನ್ನು ನನಗಿಂತ ಹೆಚ್ಚಾಗಿ ಅರಿತಿದ್ದ ಅವರ ಅನುಭವದ ಮಾತು ನನ್ನೊಳಗಿನ  ಅಭಿಮಾನವನ್ನು ಜಾಗೃತಿಗೊಳಿಸುತ್ತಲೇ ಇತ್ತು.
                  ಕವಿ ಮನೆ, ಅವರ ಫೋಟೋಗಳು,ದೊಡ್ಡ ಜಾಗ, ತುಳಸಿಕಟ್ಟೆ, ಈಗಿನ ಕಾಲದಂತೆ ಅಡ್ಡಾದಿಡ್ಡಿಯಾಗಿ ಸಿಗುವ ಮೆಟ್ಟುಣಿಕೆಗಳಂತೆ ಅಲ್ಲಿಲ್ಲ, ಪ್ರತಿಯೊಂದು ಅಚ್ಚುಕಟ್ಟಾಗಿ  ಅದರದರ ಜಾಗ ಆವರಿಸಿತ್ತು.
            ಯಾವ ಆಧುನಿಕತೆಯು ಅದರ ಸಮಾನವಿಲ್ಲ , ಅಡುಗೆಮನೆ ಅಷ್ಟು ಅಚ್ಚುಕಟ್ಟಾಗಿ ಇತ್ತು, ಹೊಗೆಗೂಡು, ಸೌದೆಮನೆ , ಪಾತ್ರೆ-ಪಗಡೆಗಳು , ಹೌದು ..ಕವಿ ತನ್ನ ಜೀವನಶೈಲಿಯನ್ನು ತನ್ನ ಕವಿತ್ವದಲ್ಲಿ ಆದರಿಸಿದ್ದಾರೆ.
             ಕವಿಮನೆ ನೋಡುವಾಗ , ಹೆಗ್ಗಡೆತನವನ್ನು ವಿವರಿಸುವ ಪ್ರತಿ ಸನ್ನಿವೇಶವು ಅಲ್ಲಿ ಪ್ರತಿಬಿಂಬವಾಗಿತ್ತು ..
    ಕಳೆದುಹೋಗಿದ್ದ ನನ್ನನ್ನು ಕತ್ತಲಾಯಿತು ಹೊರಡಿ ಹೊರಡಿ ಎಂದ ಸರಕಾರಿ ಪಾಲಕರ ಧ್ವನಿ ಕೇಳಿ ಮತ್ತೆ ಯೋಚನೆಯಲ್ಲಿ ಮುಳುಗಿ ಕೊರಗುತ್ತಿದ್ದ ನನ್ನನ್ನು , ನನ್ನ ಜನ ಮತ್ತೊಮ್ಮೆ ಸೂರ್ಯೋದಯಕ್ಕೆ ಬರೋಣವೆಂದಾಗ ಅದೆಂತದೋ ಸಾಂತ್ವಾನ ಸಿಕ್ಕಿತು.

            ಅಲ್ಲಿ ಕಂಡ ಪ್ರತಿ ಸನ್ನಿವೇಶಗಳು, ಜಾಗ, ಕವಿಶೈಲ, ಕವಿಮನೆ ನನ್ನ ಜೀವನದ ಸೌಭಾಗ್ಯದ ದಿನವೆಂದೇ ಈಗಲೂ ಸ್ಮರಿಸುತ್ತೇನೆ.
            ಒಮ್ಮೆ ಕಂಡ ನಮಗೆ ಇಷ್ಟು ಆವರಿಸುವ ಆ ಜಾಗವನ್ನು ಬಿಟ್ಟು, ತೇಜಸ್ವಿಗೆ ಅದ್ಯಾಕೆ 'ನಿರುತ್ತರ ' ಕಟ್ಟುವ ಮನಸ್ಸಾಯಿತೋ ??ಇನ್ನೂ ಅರಿಯನು.. ಅದನ್ನೊಮ್ಮೆ ಕಾಣುವ ತವಕವಿದೆ !
                       ಕಾವ್ಯಾಸಕ್ತಿಯ ಭಕ್ತರು ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ದೇವಸ್ಥಾನವಿದು...
    ಜೊತೆಗೆ ಹೋಗಿದ್ದ ಗುಂಪು ಈಗ ವೃತ್ತಿಪರ ಅನಿವಾರ್ಯತೆಗೆ ದೂರ ಹೊಮ್ಮಿದೆ.. ಅಲ್ಲಿ ತೆಗೆಸಿಕೊಂಡ ಫೋಟೋ ನೋಡುವಾಗ , ತೇಜಸ್ವಿ ಅಥವಾ ಕುವೆಂಪುರವರ ಪುಸ್ತಕಗಳನ್ನು ತೆಗೆದಾಗ , ತಪ್ಪದೆ ಕವಿಶೈಲ-ಕವಿಮನೆ ಕಣ್ಣೆದುರು ಬಂದು ಕೈ ಬೀಸಿ ಕರೆಯುತ್ತದೆ..ಇನ್ನೂ ಕಾಜಾಣದ ಕೂಗು ಕಿವಿಯಲ್ಲಿ ಗುನುಗುತ್ತಿದೆ..
                 ಕವಿಶೈಲಕ್ಕೆ, ಕವಿಮನೆಗೆ ಬರೆದ ಕವನ, ಕಲ್ಲಿನಲ್ಲಿ ಚಿತ್ರಿಸಿಕೊಂಡಿರುವ ಸಾಲುಗಳನ್ನು , ಗುನುಗಿ ನಾನೇ ಹರ್ಷಿತಗೊಳ್ಳುತ್ತೇನೆ..
               ನೀವು ಬನ್ನಿ ಒಮ್ಮೆ ಅಲ್ಲಿಗೆ ..ಮತ್ತೊಮ್ಮೆ ಅಲ್ಲಿ ಬಂದಾಗ ನಿಮ್ಮನೆಲ್ಲ ಭೇಟಿಯಾಗುತ್ತೇನೆ,
                                                                        ಕಾಣಲೇಬೇಕಾದ ಭೂಮಿಯ ನಾಕವಿದು...

                                                                                           ನಾ ಕಂಡ ಕುಪ್ಪಳ್ಳಿ...
                                                                                                                         ನಿಮ್ಮ ,
                                                                                                                 ಪೂರ್ಣ_ಚಂದ್ರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೀಗೊಂದು ೨೦೧೯ ರ ಬದುಕು...!!

ನನ್ನಪ್ಪನ ಕ್ಯಾಮೆರಾ..

ದೈತ್ಯ..