ನನ್ನಪ್ಪನ ಕ್ಯಾಮೆರಾ..

ನನ್ನಪ್ಪನ ಕ್ಯಾಮೆರಾ..


ನಾನು ಹುಟ್ಟಿದ್ದು ಬಳ್ಳಾರಿಯ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ.. ನನ್ನನ್ನು ಸ್ವಾಗತಿಸಲು ಅಮ್ಮ-ಅಕ್ಕಪಕ್ಕದ ಮನೆಯ ಅಜ್ಜಿಯಂದಿರು , ಆರು ವರುಷದ ಅಣ್ಣ ಹಾಗೂ ಮೂರು ವರುಷದ ಅಕ್ಕ ಇದ್ದರಂತೆ. ಅಪ್ಪ ಪರೀಕ್ಷೆ ಮೇಲ್ವಿಚಾರಕರಾಗಿ ಕೆಲಸಕ್ಕೆ ಹೋಗಿದ್ದರಂತೆ .. ಅಪ್ಪ ಎಂದೂ ರಜೆ ಹಾಕಿದವರಲ್ಲಾ.. ಅಣ್ಣನ ಶಾಲೆಯ ಹಾಜಾರಾತಿ ಕೂಡ ಹಾಗೆ ಇರಬೇಕೆಂದವರು .. ಪುಟ್ಟ ತಂಗಿ ಬರುವಳೆಂದೆಣಿಸಿ ಪುಟ್ಟ ಯಜಮಾನ-ನನ್ನಣ್ಣ ಶಾಲೆಗೆ ಹೋಗಲಿಲ್ಲವಂತೆ , ಮೂವತ್ತು ವರುಷ ಅವನಿಗೀಗ ..ಈಗಲೂ ಚುಡಾಯಿಸುತ್ತಾನೆ ..ನೀನು ಹುಟ್ಟಿ ನನ್ನ 100 % ಹಾಜಾರಾತಿ ತಪ್ಪಸಿದೆಯೆಂದು ..ಮಹಾನುಭಾವ, ನನ್ನನ್ನು  ಹಾಗೆ ಬೆಳೆಸಿದ್ದಾನೆ , ರಜೆ  ಹಾಕಿದರೆ ದೊಡ್ಡ ತಪ್ಪು ಎನ್ನುವಂತೆ . 108 ದೇವರಿಗೂ ಪ್ರಶ್ನಿಸಿ -ಕೈ ಮುಗಿದು ಇಬ್ಬರು ಕಾರ್ಪೊರೇಟ್ ಕೆಲಸದಲ್ಲಿ ಅನಿವಾರ್ಯ ಇದ್ದಾಗ ರಜೆ ತೆಗೆದುಕೊಳ್ಳುತ್ತೇವೆ...
         ಮನೆಯಲ್ಲಿ ಚಿಕ್ಕವಳಾಗಿದ್ದರಿಂದ ಅಪ್ಪ-ಅಮ್ಮನಿಗೆ ಹೆಚ್ಚು ಮುದ್ದು  ನಾನು , ಆದರೆ ಈ 6-3 ವರುಷದ ಕಿಲಾಡಿಗಳಿದ್ದರಿಂದ ನನ್ನ ಜಗತ್ತು ಹೀಗೆ ಎಂದು ನಿರ್ಧಾರವಾಗಿತ್ತು ..ಅಣ್ಣ ಹೇಳಿದಂತೆ ನಡೆಯಬೇಕಾದ ನಿಯಮ ರಚಿಸಿಯಾಗಿತ್ತು ..ನನಗಂತ ಹೆಚ್ಚು ಆಟಿಕೆ ಏನೂ ಇರಲಿಲ್ಲ , ಅವರಾಡಿದ ತೊಟ್ಟಿಲು -ಮುರಿದ ಆಟಿಕೆಗಳು ಮಾತ್ರ.. ನಾನು ಹೇಗಿದ್ದೆ ಅಂತ ಈಗಲೂ ಅಷ್ಟು ನೆನಪಾಗುವುದಿಲ್ಲ ,ಆದರೆ ಮನೆಯಲ್ಲಿದ್ದ ಅಪ್ಪನ ಪುಟ್ಟ ಕ್ಯಾಮೆರಾ ನಮ್ಮೂವರ ಬಾಲ್ಯವನ್ನು , ನೆನಪಿರದ ಅತ್ಯಮೂಲ್ಯವಾದ ಕ್ಷಣಗಳನ್ನು ಹಿಡಿದಿಟ್ಟಿದೆ ..
      ಚಿಕ್ಕವಳಾಗಿದ್ದರಿಂದ ನನಗೆ ಅವರಿಬ್ಬರ ಹುಡುಗಾಟ ಅಷ್ಟು ನೆನಪಿಲ್ಲ , ತಿರುಗಿಸಿ ನೋಡಿದರೆ ಅವರಿಬ್ಬರೂ ನನ್ನನ್ನೂ ಕಾಯುವ ಸ್ಟ್ರಿಕ್ಟ್ ಸೆಕ್ಯೂರಿಟಿ ಗಾರ್ಡ್ ಗಳಂತಿರುತ್ತಿದ್ದ ಘಟನೆಗಳು ನೆನಪಾಗುತ್ತವೆ.
   ನಾನು ಭೂಮಿಗೆ ಬಂದು ಎರಡು ದಶಕಗಳಾಗಿದ್ದೂ , ಬುದ್ದಿ ಬಂದಾಗಿನಿಂದಲೂ ಮನೆಯ ವಾತಾವರಣವೂ ವರುಷದಿಂದ ವರುಷಕ್ಕೂ ಅನನ್ಯ ಬದಲಾವಣೆಗಳೊಳಗೊಂಡಿದ್ದೂ, ಅವುಗಳೊಂದಿಗೆ ನಾವು ಬೆಳೆದು ಬಂದಿದ್ದೇವೆ,
 ನಾವಿದ್ದದ್ದೂ ಚಿಕ್ಕ ಟೌನಾಗಿದ್ದರಿಂದ ಉನ್ನತ ಶಿಕ್ಷಣಕ್ಕಾಗಿ ಹಾಸ್ಟೆಲ್ ಗೆ ಕಳುಹಿಸಿದರು , ಆಗಿನ ಕಾಲದಲ್ಲಿ ಅಷ್ಟು ಪರಿಶ್ರಮ ಮತ್ತು ಅಪ್ಪನ ಹಣದ ಮೌಲ್ಯವನ್ನು ಮನದಟ್ಟು ಮಾಡಿಕೊಂಡಿದ್ದ ಅಣ್ಣ ತಾನು ಬಯಸಿದಂತೆ ಯಶಸ್ವಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ.  ಅನುಸರಣಿಕೆಯಂತೆ ಅಕ್ಕ ಹಾಗೂ ನಾನು ವೃತ್ತಿಪರರಾಗಿದ್ದೇವೆ, ಹಿರಿಯರ ನಿಶ್ಚಯವಂತೆ ಅಕ್ಕನ ಮದುವೆ ಆಗಿ ಮೂರು ವರುಷವಾಗಿದೆ, ಅಣ್ಣನ ಮದುವೆ ಕೂಡ ಇತ್ತೀಚೆಗೆ ನಡೆದರೂ ವರುಷ ಸಮೀಪಿಸುತ್ತಿದ್ದು ಕಾಲ ಮಿಂಚಂತೆ ಸಾಗುತ್ತದೆ ಎಂಬುದು ಗೋಚರವಾಗುತ್ತದೆ  ..
      ಉದ್ಯೋಗಪರರಾದ ನಾವು ಆಡಿ ಬೆಳೆದ ಮನೆಯಿಂದ ದೂರ ನೆಲೆಸಿದ್ದೇವೆ , ಯಾವುದಾದರೂ ವಿಶೇಷ ಸಂಧರ್ಭಕ್ಕೆ ಅಥವಾ ಮೂರ್ನಾಲ್ಕು ರಜೆ ಕೂಡಿದರೆ ಮಾತ್ರ ಸೇರುತ್ತೇವೆ, ಇಲ್ಲದಿದ್ದರೆ ಅಪ್ಪ-ಅಮ್ಮ ಮಾತ್ರ ನಿರ್ವಯಿಲ್ಲದಂತೆ ತಾಂತ್ರಿಕತೆಯ ಸೇತುವೆಯೊಂದಿಗೆ ಮಾತು ಬೆಸೆಯುತ್ತಾರೆ.
   ಮೊನ್ನೆ ಹೀಗೆ ಎಲ್ಲರೂ ಸೇರಿದ್ದಾಗ , ಅಪ್ಪ ಸುಮಾರು ಮೂವತ್ಮೂರು ವರುಷಗಳ ಹಿಂದೆ ಸಾವಿರ ರೂಗಳನ್ನು ಕೊಟ್ಟು ತಂದಿದ್ದ ಕ್ಯಾಮೆರಾ ಬಗ್ಗೆ ಹೇಳುತ್ತಾ , ಅಣ್ಣನ ಆಟೋಪಗಳನ್ನು -ತುಂಟಾಟಗಳನ್ನು ಮನೆಯ ಸೊಸೆಗೆ ವಿವರಿಸುತಿದ್ದರು, ಮಾವ-ಸೊಸೆಯ ಮಾತಿನ ಭರದಲ್ಲಿ , ಅಮ್ಮನ್ನನ್ನು ಕೇಳಿ ಎಲ್ಲೋ ಇಟ್ಟಿದ್ದ ಆಲ್ಬಮ್ ಹುಡುಕಲು ಶುರು ಮಾಡಿದೆವು.. ಹುಡುಕುತ್ತಿರುವಾಗ ಅಮ್ಮ , ಅಪ್ಪನ ಕ್ಯಾಮೆರಾದ ಒಲವನ್ನು ವಿವರಿಸುತಿದ್ದಾಗ ಒಂದೇರಡು ಆಲ್ಬಮ್ ಇರುವುದು ಎಂದೆಣಿಸಿದ ನನಗೆ ದೊರಕಿದ ಇಪ್ಪತ್ತು ಆಲ್ಬಮ್ ನೋಡಿ ಅಮ್ಮನ ಮಾತು ನಂಬುವಂತಾಯಿತು...
   ಹೀಗೆ ದುಂಡುಹಾಕಿ ಎಲ್ಲವನ್ನು ಒಂದೊಂದೇ ನೋಡುತ್ತಾ ಹೋದಾಗ , ಒಂದು ದೊಡ್ಡ ಆಲ್ಬಮ್ ನಲ್ಲಿ ನಮ್ಮೂವರ ಬಾಲ್ಯ ಸರೆಯಾಗಿದ್ದನ್ನು ಕಂಡು ಕಣ್ಣರಳಿಸಿ ನೋಡಲು ಶುರುಮಾಡಿದೆ, ನನ್ನ ಅಣ್ಣನ ನಾಮಕರಣದ ಫೋಟೋಗಳು ಎಷ್ಟು ಮುದ್ದಾಗಿವೆಂದು , ಮನೆಯ ಯಜಮಾನ ಅವನೀಗ ಆದರೆ ಅಮ್ಮನ ಮಡಿಲಲ್ಲಿ ಮಲಗಿ ಆಡುವ ಕಂದನಾಗಿದ್ದ ಎನ್ನುವುದನ್ನು, ಕಿರಿಯಳಾಗಿ ಹುಟ್ಟಿ ಮಿಸ್ ಮಾಡಿಕೊಂಡಿದ್ದ  ಅವಕಾಶವನ್ನು ಅಪ್ಪನ ಕ್ಯಾಮೆರಾ ಕಲ್ಪಿಸಿದೆ . ಅಣ್ಣನ ಬಾಲೆಕಾರ್ಯ, ಅಕ್ಕನ ಮೊದಲ ನಡಿಗೆ, ಅಣ್ಣನ ಮೊದಲ ಬೆಂಗಳೂರಿನ ಭೇಟಿ , ಆಗಿನ ಬೆಂಗಳೂರನ್ನು ಫೋಟೋದಲ್ಲಿ ಕಂಡು, ಅದ್ಯಾಕೆ ಈಗ ರಾಕ್ಷಸ ರೂಪತಾಳಿದೆ ಎಂದು ಬಿಗು ಉಸಿರನ್ನು ಬಿಟ್ಟೆ,.
  ಅಲ್ಲಿ ಇಲ್ಲಿ ನನ್ನನ್ನು ಬಿಟ್ಟು ಇವರು ಹೋಗಿ ಬಂದ ಪಿಕ್ನಿಕ್ , ಅಪ್ಪನ ಊರಲ್ಲಿ ದಶಕಗಳ ಹಿಂದೆ ಕಟ್ಟಿಸಿದ ಮನೆಯ ಗೃಹ ಪ್ರವೇಶ, ನಾನು ಹುಟ್ಟುವ ಮುಂಚೆ ತೀರಿ ಹೋದ ಮುತ್ತಜ್ಜಿ, ಆ ಅಜ್ಜಿ ಈ ಅಜ್ಜಿಯನ್ನು ಹೀಗಿದ್ದರೇನು ಅವರು ಎಂದು ಕಲ್ಪಿಸಿಕೊಳ್ಳಲು ಸಾಧ್ಯವಾಯಿತು..
     ನೋಡುತ್ತಾ ಹೋದಾಗ ಅಚಾನಾಕ್ ಆಗಿ , ಬಳ್ಳಾರಿಯ ಗುಡ್ಡಕ್ಕೆ ಹೋಗಿದ್ದ ಕಥೆ ಹೇಳಲು ಶುರು ಮಾಡಿದರು ಅಮ್ಮ, ಆಗಲೇ ನಾನು ಎರಡೂ ಮೂರು ವರುಷದವಳೆಂದು , ನೋಡಿದರೆ ಪುಟ್ಟ-ನಾನು ಫೋಟೋದಲ್ಲಿ ಸೆರೆಯಾಗಿದ್ದೆ , ಪ್ರತಿಯೊಂದಕ್ಕೂ ಅಣ್ಣ-ಅಕ್ಕನನ್ನು ಅನುಸರಿಸುವ ನಾನು , ಆಗಲೇ ಫೋಸ್ ಎನ್ನುವದನ್ನು ಕಲಿತಿದ್ದ ಅವರೂ ಏನೇನೋ ಅವತಾರ ಮಾಡುವಾಗ ಅವರನ್ನೇ ನೋಡುತ್ತಿರುವ ನನ್ನ ಸೈಡ್ ಫೇಸ್ ಕವರ್ ಆಗಿದೆ. ಅಯ್ಯೋ ಯಾಕಮ್ಮ ನಾನು ಹೀಗೆ ನೋಡಿದ್ದೇನೆ ಅಂದಾಗ ನನ್ನಮ್ಮ ಈಗಿನ ಥರದ DSLR ಅಲ್ಲಿ ಹೇಳಿ ತೆಗೆಸುವಂತೆ  ಅಥವಾ ಸರಿಯಾಗಿ ಬಂದಿಲ್ಲಾವೆಂದರೆ ಡಿಲೀಟ್ ಮಾಡಿ ಮಾತ್ತೊಮ್ಮೆ ತೆಗೆಯುವಂತಹ ಕ್ಯಾಮೆರಾ ಅಲ್ಲಮ್ಮಾ ನಿಮ್ಮಪ್ಪನ ಕ್ಯಾಮೆರಾ ಅಂದರು ..
    ತಿರುಗ ಮುರುಗ ಹಾಕಿ ಸುಮಾರು ನಾನು ನೋಡದೆ ಇದ್ದ ಜಗತ್ತನ್ನು ಅಪ್ಪನ ಕ್ಯಾಮೆರಾ ಕೃಪಾಕಟಾಕ್ಷವನ್ನೇ ಧಾರೆಯೆರೆದಿತ್ತು ..
       ಮಾತು ಬೆಳೆದಂತೆ , ಅಪ್ಪ ಆಗಿನ ಜಗತ್ತನ್ನು ವರ್ಣಿಸುತ್ತಿದ್ದರು. ಫ್ಲಾಶ್ ಬಂತೆಂದರೆ ಫೋಟೋ ಬಂದಿದೆ, ರೀಲ್ ಗೆ ಮೂವತ್ತು ಫೋಟೋ ಮಾತ್ರವೆಂದು , ಬೆಂಗಳೂರಿಗೆ ಹೋಗಿ ತೊಳೆಸಿಕೊಂಡು ಬರುತ್ತೇವೆಂದಾಗ ...ನಾವೆಲ್ಲಾ ಏನೇನೋ ಬಟ್ಟೆ ತೊಳೆಯುವ ಸಂಧರ್ಭಕ್ಕನುಗುಣವಾಗಿ ಪ್ರಶ್ನೆ ಕೇಳುತ್ತಿದ್ದೇವಂತೆ .,ಅದನ್ನು ನೆನೆದು ಈಗ ಬೆಳೆದು ನಿಂತಿರುವ ತಾಂತ್ರಿಕತೆಯನ್ನು ಅಪ್ಪನಿಗೆ ವಿವರಿಸುವಷ್ಟು ನಮ್ಮ ಸಾಮರ್ಥ್ಯವನ್ನು ನೆನೆದು ಕಾಲೈ ತಸ್ಮೈ ನಮಃ ಎನ್ನುತ್ತಾರೆ ನನ್ನಪ್ಪ.
     ಸೋಜಿಗವಲ್ಲವೇ, ಅಣ್ಣನಿಗೂ ಅಪ್ಪನಂತೆ ಫೋಟೋ ತೆಗೆಯುವ ಹುಚ್ಚ್ಚು..!! ಅಕ್ಕ , ಅಣ್ಣನಿಗೆ ಉಡುಗೊರೆಯಾಗಿ ನೀಡಿರುವ DSLR ಅಥವಾ  ತತ್ಕ್ಷಣವೇ ತೆಗೆಯಬಹುದಾದ ಮೊಬೈಲ್ ಕ್ಯಾಮೆರಾವು  ಕೂಡ ಈ ಸಂತೋಷವನ್ನು ನೀಡದಿರುವುದನ್ನು ಅಪ್ಪನ ಕ್ಯಾಮೆರಾ ನಮಗೆ ನೀಡಿದೆ .
      ತತ್ತರದ ಜೀವನದಿಂದ ರಜಕ್ಕೆಂದು ಬಂದಾಗ ಅದೇನೂ ಹಿಡಿದಿಟ್ಟಿರುವ ರಹಸ್ಯವಾಗಿದೆ ಅಪ್ಪ ತೆಗೆದ ಫೋಟೋಗಳು.. ಇಷ್ಟೆಲ್ಲಾ ನೆನೆಪುಕೊಟ್ಟ ಅಪ್ಪ ನ ಕ್ಯಾಮೆರಾ ಈಗ ನಿವೃತ್ತಿಗೊಂಡಿದೆ .., ನಮಗಿಂತ ಕ್ಯಾಮೆರಾ ಜೊತೆ ಹೆಚ್ಚು ಒಡನಾಟ ಹೊಂದಿದ್ದ ಅಪ್ಪ, ಈಗ ಅದು ಕೆಲಸಮಾಡದಿದ್ದರೂ , ಷೋಕೇಸಿನಲ್ಲಿಡಿಸಿ ಪ್ರತಿದಿನ ನೋಡಿ ನೆನೆಯುತ್ತಾರೆ ..
  ಅದ್ಯಾಕೋ ಕೆಲವೊಮ್ಮೆ ..ಜೀವವಿರದ ವಸ್ತುಗಳೇ ನೆನಪುಗಳ ಆಗರವನ್ನು ತಂದುಕೊಡುತ್ತವಂತೆ , ಅಂತೆಯೇ ನನ್ನಪ್ಪನ ಕ್ಯಾಮೆರಾ ಕೂಡ.......!!!!

                                                                                                                           ಇಂತಿ ನಿಮ್ಮ.....
                                                                                                                          ಪೂರ್ಣ_ಚಂದ್ರ
                                                                                                                       Pavitra Nagendrappa

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೀಗೊಂದು ೨೦೧೯ ರ ಬದುಕು...!!

ದೈತ್ಯ..